ದೊಡ್ಡಬಳ್ಳಾಪುರ: ತಹಸೀಲ್ದಾರ್ ಸಹಿ ನಕಲು ಪ್ರಕರಣದ ಸುತ್ತ ಹಲವು ಅನುಮಾನಗಳು..!
Quick news Kannada: ದೊಡ್ಡಬಳ್ಳಾಪುರ,ಫೆ.18- ತಾಲ್ಲೂಕು ಕಚೇರಿಯಲ್ಲಿನ ಮುಜರಾಯಿ ಇಲಾಖೆಗೆ ಸಂಭಂದಿಸಿದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಹಸೀಲ್ದಾರ್ ಅವರ ಸಹಿ ನಕಲು ಮಾಡಿ ಹಣ ದುರುಪಯೋಗದ ಆರೋಪದ ಮೇಲೆ ಸಾಸಲು ಹೋಬಳಿ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
RTI ಕಾರ್ಯಕರ್ತರೊಬ್ಬರು ಮಧುರೆ ಹೋಬಳಿಯ ಗ್ರಾಮವೊಂದರ ಬಸವಣ್ಣನ ದೇವಸ್ಥಾನ ರಿಪೇರಿಗೆ ಆರಾಧನ ಸ್ಕೀಂ ನಡಿ ಅನುದಾನ ನೀಡುವಂತೆ ಅರ್ಜಿ ಸಲ್ಲಿಸಿದ್ದು,ಹಣ ಬಿಡುಗಡೆಗೆ ಲಂಚ ಕೇಳಿದಾಗ ಅವರು ಲಕ್ಷ ಲಕ್ಷ ಹಣ ಡ್ರಾ ಆಗಿದೆ ನಮಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಯಾಕೆ ಎಂದು ಕೇಳಿ, ಸಂಗ್ರಹಿಸಿದ್ದ ದಾಖಲೆಗಳನ್ನ ಮುಂದಿಟ್ಟಿದ್ದಾರೆ ಎನ್ನಲಾಗಿದ್ದು, ಆಗ ತಕ್ಷಣ ಎಚ್ಚೆತ್ತ ತಹಶೀಲ್ದಾರ್ ವಿಭಾ ವಿದ್ಯಾರಾಥೋಡ್ ಅವರು ,ಹೇಮಂತ್ ಕುಮಾರ್ ನನ್ನ ಕರೆದು ವಿಚಾರಣೆ ನಂತರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರನ್ನು ಆಧರಿಸಿ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಬೆಂಗಳೂರಿನ ಮಹಾಲಕ್ಷ್ಮೀಪುರದ ಕೆನರಾ ಬ್ಯಾಂಕ್ ಕುರುಬರಹಳ್ಳಿ ಶಾಖೆಯಲ್ಲಿನ ಸುಶೀಲಮ್ಮ ಎಂಬುವವರ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಬಾರಲಿಲ್ಲವೇಕೆ?:
ಮುಜರಾಯಿ ಇಲಾಖೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಹಶೀಲ್ದಾರ್ ಅವರ ಸಹಿ ನಕಲು ಮಾಡಿ ವರ್ಗಾವಣೆ ಮಾಡಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಚೆಕ್ ಬಳಕೆ ಬಹುತೇಕ ನಿಲ್ಲಿಸಲಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ( RTGS) ನೇರ ಹಣ ವರ್ಗಾವಣೆ ಜಾರಿಗೆ ಬಂದು ವರ್ಷಗಳೇ ಕಳೆದಿವೆ. ಆದರೂ ಬೆಂಗಳೂರಿನ ಬ್ಯಾಂಕ್ ಶಾಖೆಗೆ ದೊಡ್ಡ ಮೊತ್ತ ಚೆಕ್ ಮೂಲಕ ವರ್ಗಾವಣೆ ಆದದ್ದಾದರು ಹೇಗೆ?.
ಸರ್ಕಾರಿ ಕಚೇರಿಯ ಯಾವುದೇ ಇಲಾಖೆಯ ಹಣ ವರ್ಗಾವಣೆಯಾಗುವುದು RTGS ಮೂಲಕವೇ. ಆದರೆ ಈ ಪ್ರಕರಣದಲ್ಲಿ ಮುಜರಾಯಿ ಇಲಾಖೆಯ ಹಣವನ್ನು ಲಪಟಾಯಿಸಲು ಚೆಕ್ ಬಳಸಿರುವುದು, ತಹಶಿಲ್ದಾರ್ ನಕಲಿ ಸಹಿ ಮಾಡಿರುವುದು ಹೇಗೆ..? ಅದೂ ಅಲ್ಲದೆ 2023 ರಿಂದಲೇ ಈ ರೀತಿ ನಕಲಿ ಸಹಿ ಬಳಸಿ ಹಣ ಎತ್ತಲಾಗಿದೆ ಎನ್ನಲಾಗುತ್ತಿದೆ. 2023 ರಿಂದ ಇಲ್ಲಿಯವರೆಗೆ ಆಡಿಟಿಂಗ್ ನಡೆದಿಲ್ಲವೆ? ನಡೆದಿದ್ದರೆ ಆಗ ಬೆಳಕಿಗೆ ಬರಲಿಲ್ಲವೇಕೆ?.
ಪ್ರತಿ ಬಾರಿ ಹಣ ಡ್ರಾ ಆದಾಗ ಅಕೌಂಟ್ ಮುಖ್ಯಸ್ಥರ ಮೊಬೈಲ್/ ಇ- ಮೇಲ್ ಗೆ ಮೆಸೇಜ್ ರವಾನೆಯಾಗುತ್ತದೆ,ಹಲವು ಬಾರಿ ಲಕ್ಷ ಲಕ್ಷ ಹಣ ಡ್ರಾ ಆಗುತಿದ್ದರು, ಈ ಬಗ್ಗೆ ಗಮನ ಹರಿಸಲಿಲ್ಲವೆ? ಅಥವಾ ನಿರ್ಲಕ್ಷ್ಯ ವಹಿಸಿದ್ದು ಯಾಕೆ!?.
ಸಣ್ಣ ಅನುಮಾನ ಬರದಂತೆ ಒಬ್ಬ ತಹಸೀಲ್ದಾರ್ ಸಹಿ ನಕಲು ಮಾಡಲು ಸಾಧ್ಯವೆ? ಅಷ್ಟು ಬಾರಿ ನಕಲಿ ಸಹಿ ಬಳಸಿದರು,ನೇರ ಹಣ ವರ್ಗಾವಣೆ ಜಾರಿಯಲ್ಲಿದ್ದರು ಚೆಕ್ ಬಳಸಿ ಡ್ರಾ ಮಾಡುತ್ತಿದ್ದರು,ಬೆಂಗಳೂರಿನ ಶಾಖೆಗೆ ಹಣ ವರ್ಗಾವಣೆ ಯಾದರು ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಬಾರದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.ಮುಜರಾಯಿ ಇಲಾಖೆಯ ಆರ್ಥಿಕ ಭ್ರಷ್ಟಾಚಾರದ ಹಿಂದೆ ಇರುವುದು ಹೇಮಂತ್ ಕುಮಾರ್ ಮಾತ್ರನಾ? ಅಥವಾ ಇತರರು ಶಾಮೀಲಾಗಿದ್ದಾರ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರಿ ಖಜಾನೆಯ ಲಕ್ಷಾಂತರ ಹಣ ದುರ್ಬಳಕೆ ಕುರಿತು ಮತ್ತು ಸಹಿ ನಕಲು ಮಾಡಿರುವುದು ಯಾರು,ಇದರಲ್ಲಿ ಯಾರ ಪಾಲು ಎಷ್ಟು ಎಂಬುದು ಉನ್ನತ ಮಟ್ಟದ, ವಸ್ತು ನಿಷ್ಠ,ಪ್ರಾಮಾಣಿಕ ತನಿಖೆಯಿಂದಷ್ಟೆ ಹೊರಬರಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
Comments
Post a Comment